Wednesday, October 6, 2010

ಫೀಡ್ ಬರ್ನರ್‍ ಮತ್ತು ಟ್ವಿಟರ್‍

ಫೀಡ್ ಬರ್ನರ್‌ನ ಹಿಂದಿನ ಸಂಚಿಕೆಯಲ್ಲಿ ಬ್ಲಾಗ್ ಓದುಗರಿಗೆ ನಿಮ್ಮ ಲೇಖನಗಳನ್ನು ಇ-ಮೇಲ್ ಮೂಲಕ ತಲುಪಿಸುವುದು ಹೇಗೆಂದು ತಿಳಿಸಿದ್ದೆ. ಈ ಸಲ, ನೀವು ಬ್ಲಾಗಿನಲ್ಲಿ ಹೊಸ ಬರಹ ಸೇರಿಸಿದಾಗ ಅದರ ಶೀರ್ಷಿಕೆ ತಾನಾಗಿಯೇ ಟ್ವಿಟರ್‌ನಲ್ಲಿ ಬರುವಂತೆ ಮಾಡುವುದು ಹೇಗೆ ಎಂದು ನೋಡೋಣ.(ಇದಕ್ಕೆ ನಿಮ್ಮಲ್ಲಿ ಒಂದು ಟ್ವಿಟರ್‍ ಅಕೌಂಟ್ ಇರಬೇಕು. ಇದರ ಉಪಯೋಗವೆಂದರೆ ನೀವು ನಿಮ್ಮ ಬ್ಲಾಗಿನಲ್ಲಿ ಹೊಸ ಲೇಖನ ಬರೆದಾಗ ಅದರ ಶೀರ್ಷಿಕೆ ಹಾಗೂ ಲೇಖನದ ಒಂದೆರಡು ಸಾಲು ಜೊತೆಗೆ ಆ ಲೇಖನಕ್ಕೆ ಲಿಂಕ್ ಟ್ವಿಟರ್‌ನಲ್ಲಿ ಪ್ರಕಟವಾಗುತ್ತದೆ. ಅದನ್ನು ನೋಡುವ ನಿಮ್ಮ ಟ್ವಿಟರ್‍ ಹಿಂಬಾಲಕರು{Followers} ನಿಮ್ಮ ಬ್ಲಾಗಿಗೆ ಭೇಟಿ ನೀಡಬಹುದು.)

ಈಗ ಅದನ್ನು ಪ್ರಾರಂಭಿಸುವುದು ಹೇಗೆ ನೋಡೋಣ. ಮೊದಲು ಫೀಡ್ ಬರ್ನರ್‍ ತಾಣಕ್ಕೆ ಹೋಗಿ(http://feedburner.com). ಅಲ್ಲಿ ನಿಮ್ಮ ಗೂಗಲ್ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ಕೊಟ್ಟು ಲಾಗಿನ್ ಆಗಿ.


(ಚಿತ್ರಗಳನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

ನಂತರ ನಿಮ್ಮ ಫೀಡ್ ಟೈಟಲ್ (FEED TITLE) ಮೇಲೆ ಕ್ಲಿಕ್ ಮಾಡಿ.




 ನಂತರ ಬರುವ ವಿಂಡೋನಲ್ಲಿ ಮೇಲ್ಗಡೆ Publicize ಎಂಬ ಟ್ಯಾಬ್ ಇರುತ್ತದೆ. ಅದರ ಮೇಲೆ ಕ್ಲಿಕ್ಕಿಸಿ.



ಈಗ ಎಡಬದಿಯಲ್ಲಿರುವ Socialize ಒತ್ತಿ. Select account ಕೆಳಗೆ ಇರುವ Add a Twitter account ಮೇಲೆ ಕ್ಲಿಕ್ ಮಾಡಿ.




ಈಗ ಒಂದು ಹೊಸ ಟ್ವಿಟರ್‍ ವಿಂಡೋ ತೆರೆಯುತ್ತದೆ. ಅಲ್ಲಿ ನಿಮ್ಮ ಟ್ವಿಟರ್‍ ಯೂಸರ್‍ ನೇಮ್ ಮತ್ತು ಪಾಸ್‌ವರ್ಡ್ ಟೈಪಿಸಿ, Allow ಬಟನ್ ಒತ್ತಿ.




ಇಷ್ಟು ಮಾಡಿದರೆ ಅರ್ಧ ಕೆಲಸ ಮುಗಿದಂತೆ ಆಯಿತು. ಈಗ ಇನ್ನೊಂದು ವಿಂಡೋನಲ್ಲಿರುವ ಫೀಡ್ ಬರ್ನರ್‌ನ Socialize ಆಯ್ಕೆಗೆ ಬನ್ನಿ. Post content: ಇಲ್ಲಿ ಲೇಖನದ ಶೀರ್ಷಿಕೆ ಮಾತ್ರ ಟ್ವೀಟ್ ಆಗಬೇಕೇ ಅಥವಾ ಶೀರ್ಷಿಕೆಯ ಜೊತೆ ಲೇಖನದ ಒಂದೆರಡು ಸಾಲುಗಳೂ ಸೇರಬೇಕೆ ಎಂದು ಆರಿಸಿ. Include link ಮತ್ತು Leave room for retweets ಸೆಲೆಕ್ಟ್ ಮಾಡಿ. ಉಳಿದ ಆಯ್ಕೆಗಳು ಅಷ್ಟೇನೂ ಮುಖ್ಯವಲ್ಲ, ಬೇಕಿದ್ದರೆ ಅವುಗಳನ್ನು ತುಂಬಿಸಿ.



ನಂತರ ಕೆಳಗೆ Sample Item Preview ನೋಡಿಕೊಳ್ಳಿ. ಎಲ್ಲಾ ಸರಿಯಿದೆ ಎನಿಸಿದರೆ ಕೊನೆಯಲ್ಲಿ Activate ಬಟನ್ ಇರುತ್ತದೆ, ಅದನ್ನು ಒತ್ತಿ.


ಅಲ್ಲಿಗೆ ಎಲ್ಲಾ ಕೆಲಸಗಳು ಮುಗಿದಂತೆ. ಮುಂದಿನ ಸಲ ನೀವು ನಿಮ್ಮ ಬ್ಲಾಗ್‌ನಲ್ಲಿ ಹೊಸ ಬರಹ ಸೇರಿಸಿದಾಗ ಅದರ ಶೀರ್ಷಿಕೆ ಮತ್ತು ಆ ಬರಹಕ್ಕೆ ಲಿಂಕ್ ಟ್ವೀಟಾಗುತ್ತದೆ. ಇದರ ಜೊತೆಗೆ ನೀವು ಫೇಸ್‌‌ಬುಕ್‌ನಲ್ಲಿ ಟ್ವಿಟರ್‍ ಅಪ್ಲಿಕೇಷನ್ ಸೇರಿಸಿದ್ದರೆ ಅಲ್ಲಿಯೂ ಆ ಟ್ವೀಟ್ ನಿಮ್ಮ ಸ್ನೇಹಿತರಿಗೆ ಕಾಣಿಸುತ್ತದೆ. ಆಗ ಅವರು ನಿಮ್ಮ ಬ್ಲಾಗಿಗೆ ಭೇಟಿ ನೀಡಬಹುದು.(ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವುದು ಜಾಣತನ ಅಲ್ಲವೇ?) ನಿಮ್ಮಲ್ಲಿ ಟ್ವಿಟರ್‍ ಅಕೌಂಟ್ ಇಲ್ಲದಿದ್ದರೆ ಇನ್ನೂ ಏಕೆ ಕಾಯುತ್ತಿದ್ದೀರ? ಈಗಲೇ ಒಂದು ಅಕೌಂಟ್ ಹೊಂದಿ ಮತ್ತು ನಿಮ್ಮ ಬ್ಲಾಗಿಗೆ ಓದುಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಿ.

ಈ ವಿಧಾನ ಬೇಡ ಎನ್ನುವುದಾದರೆ ನಿಮ್ಮ ಬ್ಲಾಗ್ ಪೋಸ್ಟ್‌‌ನ ಕೆಳಗೆ ಟ್ವೀಟ್ ಬಟನ್ ಇರುತ್ತದೆ. ಅದನ್ನು ಒತ್ತಿ ಟ್ವೀಟಿಸಬಹುದು.

ಹ್ಞಾಂ... ಸಂಪದದಲ್ಲೂ ಟ್ವೀಟ್ ಬಟನ್ ಇದೆ ಗಮನಿಸಿದ್ದೀರಾ? 


© ಪ್ರಸನ್ನ ಶಂಕರಪುರ

Web Hosting

Friday, October 1, 2010

ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ!

ಟಿವಿ9ನಲ್ಲಿ ಬ್ರೇಕಿಂಗ್ ನ್ಯೂಸ್ ಎಂದು ಮೇಲೆ ಕೆಳಗೆ ಸುದ್ಧಿಗಳನ್ನು ಪ್ರಕಟಿಸುತ್ತಿರುತ್ತಾರೆ. ಆದರೆ ಆ ಎರಡು ಸುದ್ಧಿಗಳು ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿದ್ದರೆ, ಎರಡನ್ನೂ ಒಟ್ಟಿಗೆ ಕೂಡಿಸಿಕೊಂಡು ಓದಿ, ಎಷ್ಟು ಮಜವಾಗಿರುತ್ತದೆ ಎಂದು ಗೊತ್ತಾಗುತ್ತದೆ. ನಿನ್ನೆ ಅಯೋಧ್ಯೆ ಪ್ರಕರಣಕ್ಕೆ ತೀರ್ಪು ಬಂದ ಬೆನ್ನಲ್ಲೇ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಪುತ್ರನೂ ಲಂಚ ಹಗರಣದಲ್ಲಿ ಸಿಕ್ಕಿಬಿದ್ದಿದ್ದು ಟಿವಿ9ನಲ್ಲಿ ಪ್ರಸಾರವಾಗುತ್ತಿತ್ತು. ಮೇಲೆ ಅಯೋಧ್ಯೆಯ ಬಗ್ಗೆ ಹಾಗೂ ಕೆಳಗೆ ಜಗದೀಶ್ ನಾಯ್ಡು ಬಗ್ಗೆ ಸಾಲುಗಳು, ಅದನ್ನು ಕೂಡಿಸಿ ಓದಿದಾಗ ನನಗೆ ಕಾಣಿಸಿದ ತಮಾಷೆ ಇಲ್ಲಿದೆ.

ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆ
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ

ಸುಪ್ರಿಂ ಕೋರ್ಟ್‌ಗೆ ಹೋಗಲು ತೀರ್ಮಾನ
ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿಕೆ

ನಿಜವಾದ ಸುದ್ಧಿಗಳನ್ನು ತಿಳಿಯಲು ಒಂದು, ಮೂರು ಹಾಗೂ ಎರಡು ನಾಲ್ಕನೆಯ ಸಾಲುಗಳನ್ನು ಓದಿ.

ಈ ರೀತಿ ಇನ್ನಷ್ಟು ಸುದ್ಧಿಗಳನ್ನು ಗಮನಿಸಿದಿರೆ ನಿಮ್ಮೊಂದಿಗೆ ಹಂಚಿಕೊಳ್ಳುವೆ, ನೀವೂ ಇಂತವುಗಳನ್ನು ನೋಡಿದರೆ ನಮ್ಮೊಂದಿಗೆ ಹಂಚಿಕೊಳ್ಳಿ.

-ಪ್ರಸನ್ನ ಶಂಕರಪುರ


Web Hosting

ರಾಮ ಜನ್ಮಭೂಮಿ - ಬಾಬರಿ ಮಸೀದಿ ವಿವಾದ ನನ್ನ ದೃಷ್ಟಿಯಲ್ಲಿ.

ರಾಮಜನ್ಮ ಭೂಮಿ - ಬಾಬ್ರಿ ಮಸೀದಿ ಜಾಗದ ಬಗ್ಗೆ ತೀರ್ಪು ಬರಲಿದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುವ ತನಕ ಹೀಗೊಂದು ವಿವಾದವಿದೆ ಎಂದೇ ನನಗೆ ಗೊತ್ತಿರಲಿಲ್ಲ. ಗೊತ್ತಾದ ಮೇಲೂ ಇದರ ಬಗ್ಗೆ ನನಗೆ ಯಾವ ಆಸಕ್ತಿಯೂ ಇರಲಿಲ್ಲ. ನಾನು ಹುಟ್ಟುವ ವೇಳೆಗೆ ಗಲಾಟೆ, ಹತ್ಯಾಕಾಂಡಗಳೆಲ್ಲಾ ಮುಗಿದೇ ಹೋಗಿತ್ತು. ಬುದ್ಧಿ  ಬೆಳೆಯುವ ವೇಳೆಗಾಗಲೇ ತೀರ್ಪು ಬರುವ ಸಮಯವಾಗಿತ್ತು. ನಾನು ಈ ವಿಷಯದಲ್ಲಿ ಧಾರ್ಮಿಕವಾಗಿಯಾಗಲೀ ಅಥವಾ ಭಾವನಾತ್ಮಕವಾಗಿಯಾಗಲೀ ತೊಡಗಿಸಿಕೊಳ್ಳಲೇ ಇಲ್ಲ. ಹೀಗಾಗಿ ಈ ತೀರ್ಪಿನಿಂದ ನನಗೆ ಸಂತೋಷವೂ ಆಗಿಲ್ಲ, ಬೇಸರವೂ ಆಗಿಲ್ಲ.

ತೀರ್ಪು ಬಂದ ಮೇಲೂ ಈ ವಿಷಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಉಂಟಾಗಲಿಲ್ಲ. ಜನರಿಗೂ ಇದರ ಬಗ್ಗೆ ಕುತೂಹಲ ಇದ್ದ ಬಗ್ಗೆ ನಾಕಾಣೆ. ಯಾವುದೋ ಒಂದು ಪಂಗಡದ ಜನರನ್ನು ಒಲಿಸಿಕೊಳ್ಳಲು ರಾಜಕೀಯ ಪಕ್ಷಗಳು ಸುಮ್ಮನೇ ಈ ವಿಷಯವನ್ನು ದಾಳವಾಗಿಸಿಕೊಂಡಿವೆ ಅನಿಸುತ್ತದೆ. ತೀರ್ಪು ಬರುವ ಮೊದಲು ಹಾಗೂ ತೀರ್ಪು ಬಂದ ನಂತರ ಸುತ್ತ ಮುತ್ತಲ ಜನರಲ್ಲಿ ಯಾವುದೇ ರೀತಿಯ ಬದಲಾವಣೆಯನ್ನೂ ನಾನು ಗಮನಿಸಿಲ್ಲ.

ಅಲ್ಲಿರುವ ತುಂಡು ಭೂಮಿ ಯಾರಿಗೆ ಸೇರಿದರೇನು? ಆ ಜಾಗ ಭಾರತಕ್ಕೇ ಸೇರಿದ್ದಲ್ಲವೇ? ನಾವೆಲ್ಲರೂ ಭಾರತೀಯರಲ್ಲವೇ?

-ಪ್ರಸನ್ನ ಶಂಕರಪುರ


Web Hosting

Wednesday, September 29, 2010

ಲಿನಕ್ಸ್ ಮತ್ತು ವಿಂಡೋಸ್ dual bootಗೆ ನನ್ನ ವಿಧಾನ

ಲಿನಕ್ಸ್ ಹಾಗೂ ವಿಂಡೋಸ್‌ನ್ನು ಒಟ್ಟಿಗೆ (dual boot) ಬಳಸುವಾಗ ಕೆಲವೊಮ್ಮೆ ಸಮಸ್ಯೆ ಉಂಟಾಗುತ್ತಿತ್ತು. ಲಿನಕ್ಸಿನಲ್ಲಿ ಏನೋ ಪ್ರಯೋಗ ಮಾಡುವುದಕ್ಕೆ ಹೋಗಿ grub ಹಾಳಾಗಿಬಿಟ್ಟರೆ ಅದನ್ನು ಸರಿಪಡಿಸುವ ತನಕ ಲಿನಕ್ಸೂ ಉಪಯೋಗಿಸುವುದಕ್ಕೆ ಆಗುತ್ತಿರಲಿಲ್ಲ, ವಿಂಡೋಸೂ ಬೂಟಾಗುತ್ತಿರಲಿಲ್ಲ. ಕೆಲವು ಸಲ ಈ ರೀತಿ ಕಿತಾಪತಿ ಮಾಡಿಟ್ಟು ಅಪ್ಪನಿಂದ ಬೈಸಿಕೊಳ್ಳುತ್ತಿದ್ದೆ. ಇದಕ್ಕೇನಾದರೂ ಪರಿಹಾರ ಇದೆಯೇ ಎಂದು ಯೋಚಿಸುತ್ತಿದ್ದಾಗ ಹೊಳೆಯಿತು ನೋಡಿ ಒಂದು ಐಡಿಯಾ! ನನ್ನ ಹತ್ತಿರ ಒಂದು ಹಳೆಯ ಹಾರ್ಡ್‌ಡಿಸ್ಕ್ ಇತ್ತು. ಆದರೆ ಅದರ ಜಂಪರ್‍ ಎಲ್ಲೋ ಕಳೆದು ಹೋಗಿತ್ತು. ಆಮೇಲೆ ಹಳೆಯ ಸಿಡಿ ಡ್ರೈವ್ ಒಂದರಿಂದ ಜಂಪರ್‍ ತೆಗೆದು ಇದಕ್ಕೆ ಹಾಕಿ ಮಾಸ್ಟರ್‍ ಡಿಸ್ಕ್ ಮಾಡಿದೆ. ನನ್ನ ಕಂಪ್ಯೂಟರ್‌ನ ಹೊಸ ಹಾರ್ಡ್‌ಡಿಸ್ಕ್ ಡಿಸ್‌ಕನೆಕ್ಟ್ ಮಾಡಿ ಈ ಡಿಸ್ಕ್‌ನ್ನು ಕನೆಕ್ಟ್ ಮಾಡಿದೆ. ನಂತರ ಅದರಲ್ಲಿ ಲಿನಕ್ಸ್ ಇನ್ಸ್ಟಾಲ್ ಮಾಡಿಕೊಂಡೆ. ಆಮೇಲೆ ಹೊಸ ಹಾರ್ಡ್‌ಡಿಸ್ಕ್‌‌ನ್ನೂ ಕನೆಕ್ಟ್ ಮಾಡಿದೆ. ಈಗ ವಿಂಡೋಸ್ ಬೂಟ್ ಆಗಬೇಕೆಂದರೆ BIOSನಲ್ಲಿ ಹಳೆಯ ಹಾರ್ಡ್‌ಡಿಸ್ಕ್ None ಎಂದು ಕೊಡುತ್ತೇನೆ. ಆಗ ಹೊಸ ಹಾರ್ಡ್‌ಡಿಸ್ಕಿನಿಂದ ವಿಂಡೋಸ್ ಬೂಟಾಗುತ್ತದೆ. ನನಗೆ ಲಿನಕ್ಸ್ ಉಪಯೋಗಿಸಬೇಕಿದ್ದರೆ BIOSನಲ್ಲಿ ಹಳೆಯ  ಹಾರ್ಡ್‌ಡಿಸ್ಕ್‌ನ್ನು ಮಾಸ್ಟರ್‍ ಡಿಸ್ಕ್ ಎಂದೂ, ಹೊಸ ಹಾರ್ಡ್‌ಡಿಸ್ಕ್‌ನ್ನು None ಎಂದೂ ಕೊಡುತ್ತೇನೆ. ಆಗ ಹಳೆಯ ಹಾರ್ಡ್‌ಡಿಸ್ಕ್‌ನಿಂದ ಲಿನಕ್ಸ್ ಬೂಟಾಗುತ್ತದೆ. ತಮಾಷೆ ಅಂದ್ರೆ ಒಂದು ಸಲ ಲಿನಕ್ಸ್ ಅಥವಾ ವಿಂಡೋಸ್ ಬೂಟಾದ ನಂತರ ಹೊಸದು ಮತ್ತು ಹಳೆಯದು ಎರಡೂ ಹಾರ್ಡ್‌ಡಿಸ್ಕ್‌ನ್ನು ತೋರಿಸುತ್ತದೆ. ಹಾಗಾಗಿ ಯಾವ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಯಾವ ಡಿಸ್ಕಿನ ಮಾಹಿತಿ ಬೇಕಾದರೂ ಪಡೆಯಬಹುದು. ಯಾವುದಾದರೂ ಒಂದು ಡಿಸ್ಕನ್ನು BIOSನಲ್ಲಿ None ಎಂದು ಕೊಡದಿದ್ದರೆ ಯಾವುದರಿಂದಲೂ ಬೂಟಾಗುತ್ತಿಲ್ಲ. ಅದಕ್ಕೂ ಒಂದು ಪರಿಹಾರ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇನೆ.

ಈ ಐಡಿಯಾಗಳೆಲ್ಲಾ ಹೇಗೆ ಹೊಳೆಯುತ್ತವೆ ಅಂತ ಕೆಲವೊಮ್ಮೆ ನನಗೇ ಆಶ್ಚರ್ಯವಾಗುತ್ತದೆ. ನಾನು ಶಾಲೆಯಲ್ಲಾಗಲೀ, ಕಾಲೇಜಿನಲ್ಲಾಗಲೀ ಒಂದಕ್ಷರ ಕಂಪ್ಯೂಟರ್‍ ಸೈನ್ಸ್ ಓದಿಲ್ಲ. ಆದರೂ ಕಂಪ್ಯೂಟರ್‌ನ ಮೇಲಿನ ತುಡಿತ ನಾನಾಗಿಯೇ ಹೊಸ ವಿಷಯಗಳನ್ನು ಕಲಿತುಕೊಳ್ಳುವಂತೆ ಮಾಡಿದೆ.



-ಪ್ರಸನ್ನ.ಎಸ್.ಪಿ

Web Hosting