Showing posts with label ತಂತ್ರಜ್ಞಾನ. Show all posts
Showing posts with label ತಂತ್ರಜ್ಞಾನ. Show all posts

Monday, November 15, 2010

ಗೂಗಲ್ ಸರ್ಚ್: ನಿರ್ಧಿಷ್ಟ ತಾಣಕ್ಕೆ ಸೀಮಿತಗೊಳಿಸುವ ವಿಧಾನ

ನೀವು ಯಾವುದೇ ಒಂದು ನಿರ್ಧಿಷ್ಟ ತಾಣದಲ್ಲಿ ವಿಷಯಗಳನ್ನು ಹುಡುಕಬೇಕಾಗಿರುತ್ತದೆ, ಆದರೆ ಆ ತಾಣದಲ್ಲಿ ಹುಡುಕುವುದಕ್ಕೆ ಯಾವುದೇ ಸೌಲಭ್ಯ ಇರುವುದಿಲ್ಲ. ಆಗ ನೀವು ಯಾವುದೇ ಸರ್ಚ್ ಎಂಜಿನ್‌‌ನಲ್ಲಿ ಆ ವಿಷಯವನ್ನು ಹುಡುಕಲು ಕೊಟ್ಟರೆ ಅದು, ಆ ವಿಷಯವಿರುವ ಎಲ್ಲಾ ತಾಣಗಳನ್ನೂ ತೋರಿಸುತ್ತದೆ. ಅಂತಹ ಸಂದರ್ಭದಲ್ಲಿ ನಿರ್ಧಿಷ್ಟ ತಾಣದಲ್ಲಿ ವಿಷಯಗಳನ್ನು ಹುಡುಕಲು ಗೂಗಲ್‌ನಲ್ಲಿ ಸಾಧ್ಯವಾಗುತ್ತದೆ. ಅದಕ್ಕಾಗಿ ಮೊದಲು ಗೂಗಲ್ ತಾಣಕ್ಕೆ ಹೋಗಬೇಕು. ನಂತರ ಸರ್ಚ್‌ಬಾಕ್ಸ್‌ನಲ್ಲಿ ಮೊದಲು "site:ವೆಬ್‌ಸೈಟ್ ವಿಳಾಸ {ಸ್ಪೇಸ್} ವಿಷಯ" ಈ ರೀತಿ ಕೊಟ್ಟು ನಂತರ ಸರ್ಚ್ ಕೊಡಬೇಕು. ಆಗ ನೀವು ಸೂಚಿಸಿದ ನಿರ್ಧಿಷ್ಟ ತಾಣದಿಂದ ಮಾತ್ರ ಫಲಿತಾಂಶಗಳನ್ನು ಗೂಗಲ್ ತೋರಿಸುತ್ತದೆ.

ಉದಾಹರಣೆಗೆ-- site:sampada.net ಲಿನಕ್ಸಾಯಣ ಎಂದು ಕೊಟ್ಟು ಸರ್ಚ್ ಒತ್ತಿದರೆ ಸಂಪದದಲ್ಲಿ ಮಾತ್ರ ಇರುವ ಲಿನಕ್ಸಾಯಣ ಪುಟಗಳನ್ನು ತೋರಿಸುತ್ತದೆ.

(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)


(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ


Wednesday, November 10, 2010

ಬ್ಲಾಗರ್‍ ಟೆಂಪ್ಲೇಟ್‌ನ್ನು restore ಮಾಡುವ ವಿಧಾನ

ಬ್ಲಾಗರ್‌ನಲ್ಲಿರುವ ನಿಮ್ಮ ಬ್ಲಾಗ್‌ನಲ್ಲಿ ಏನೇ ಬದಲಾವಣೆ ಮಾಡಬೇಕಾದರೂ ಮೊದಲು ಈಗಿರುವ ಟೆಂಪ್ಲೇಟ್‌ನ್ನು ಸೇವ್ ಮಾಡಿಟ್ಟುಕೊಳ್ಳಿ, ಇದರಿಂದ ಬದಲಾವಣೆ ಮಾಡಿದ ಮೇಲೆ ಏನಾದರೂ ತೊಂದರೆಯಾದರೆ ಮೊದಲಿದ್ದ ರೂಪಕ್ಕೇ ಬ್ಲಾಗನ್ನು ಮರಳಿಸಬಹುದು.

(ಚಿತ್ರಗಳನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

ಅದಕ್ಕಾಗಿ ಮೊದಲು ನಿಮ್ಮ ಬ್ಲಾಗರ್‍ ಡ್ಯಾಶ್‌ಬೋರ್ಡ್‌ನಲ್ಲಿ Design ಮೇಲೆ ಕ್ಲಿಕ್ ಮಾಡಿ, ನಂತರ Edit HTML ಒತ್ತಿ.


ಅಲ್ಲಿ Backup / Restore Template ಕೆಳಗೆ Download Full Template ಎಂದು ಇರುತ್ತದೆ. ಅದನ್ನು ಕ್ಲಿಕ್ ಮಾಡಿ.



ನಂತರ ಫೈಲ್ ಓಪನ್ ಮಾಡಬೇಕೇ ಅಥವಾ ಸೇವ್ ಮಾಡಬೇಕೆ ಎಂದು ಕೇಳುತ್ತದೆ. ಆಗ Save File ಆಯ್ಕೆಯನ್ನು ಆರಿಸಿ, ನಂತರ Save ಬಟನ್ ಒತ್ತಿ. ಅಲ್ಲಿಗೆ ನಿಮ್ಮ ಕಂಪ್ಯೂಟರ್‌ನಲ್ಲಿ ನಿಮ್ಮ ಬ್ಲಾಗಿನ ಟೆಂಪ್ಲೇಟ್ ಕೋಡ್ ಇರುವ .xml ಫೈಲ್ ಸೇವ್ ಆಗಿರುತ್ತದೆ. ಅದನ್ನು ಜೋಪಾನವಾಗಿ ಇಟ್ಟುಕೊಳ್ಳಿ, ಮುಂದೆಂದಾದರೂ ಬ್ಲಾಗಿನ ಡಿಸೈನ್ ಬದಲಿಸಲು ಹೋಗಿ ತೊಂದರೆಯಾದರೆ ಹಿಂದಿದ್ದ ಟೆಂಪ್ಲೇಟನ್ನೇ restore ಮಾಡಬಹುದು.


ಈಗ ಟೆಂಪ್ಲೇಟ್ restore ಮಾಡುವುದು ಹೇಗೆಂದು ನೋಡೋಣ. ಮೊದಲು ಬ್ಲಾಗರ್‌ನ Dashboard--> Design--> Edit HTMLಗೆ ಹೋಗಿ, ಅಲ್ಲಿ Backup / Restore Template ಎಂಬುದರ ಕೆಳಗೆ Browse.. ಬಟನ್ ಇರುತ್ತದೆ, ಅದನ್ನು ಒತ್ತಿ.


ನಂತರ ನಿಮ್ಮ ಟೆಂಪ್ಲೇಟ್‌ ಕೋಡ್ ಇರುವ .xml ಫೈಲ್‌ನ್ನು ಆರಿಸಿ Open ಒತ್ತಿ.


ಆಮೇಲೆ Browse.. ಪಕ್ಕದಲ್ಲಿರುವ Upload ಬಟನ್ ಒತ್ತಿ.



ಕೊನೆಗೆ ಕೆಳಭಾಗದಲ್ಲಿ SAVE TEMPLATE ಎಂದು ಬರೆದಿರುವ ಕೇಸರಿ ಬಣ್ಣದ ಬಟನ್ ಇರುತ್ತದೆ. ಅದನ್ನು ಒತ್ತಿದರೆ ಆಯಿತು. ನಿಮ್ಮ ಮೊದಲಿದ್ದ ಟೆಂಪ್ಲೇಟ್ restore ಆಗುತ್ತದೆ.





ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ

Monday, November 8, 2010

ನುಡಿಯಲ್ಲಿ ಬರೆದಿರುವುದನ್ನು ಯೂನಿಕೋಡ್‌ಗೆ ಪರಿವರ್ತಿಸುವ ವಿಧಾನ

ನುಡಿ(ANSI)ಯಲ್ಲಿ ಬರೆದಿರುವುದನ್ನು ಯೂನಿಕೋಡ್‌ಗೆ ಪರಿವರ್ತಿಸುವುದು ಹೇಗೆಂದು ತುಂಬಾ ಜನರಿಗೆ ಗೊಂದಲಗಳಿವೆ. ಆದರೆ ಬರಹ ತಂತ್ರಾಂಶದ ಜೊತೆ ಬರುವ Baraha Convert ಸಲಕರಣೆಯ ಸಹಾಯದಿಂದ ನುಡಿಯಲ್ಲಿ ಬರೆದಿರುವುದನ್ನು ಸುಲಭವಾಗಿ ಯೂನಿಕೋಡ್‌ಗೆ ಪರಿವರ್ತಿಸಬಹುದು. ಅದಕ್ಕಾಗಿ ಮೊದಲು ಬರಹ ತಂತ್ರಾಂಶವನ್ನು ಇಲ್ಲಿಂದ (http://baraha.com) ಡೌನ್ಲೋಡ್‌ ಮಾಡಿಕೊಂಡು ನಿಮ್ಮ ಕಂಪ್ಯೂಟರ್‌ನಲ್ಲಿ ಸ್ಥಾಪಿಸಿ (install). (Baraha 7.0 ಆದರೆ ಸುಲಭ)

(ಇಲ್ಲಿರುವ ಚಿತ್ರಗಳನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

ಮೊದಲು ನೀವು ನುಡಿಯಲ್ಲಿ ಬರೆದಿರುವುದನ್ನು ಕಾಪಿ ಮಾಡಿಕೊಳ್ಳಿ.



ನಂತರ Baraha Convert ಸಲಕರಣೆಯನ್ನು ಚಾಲನೆ ಮಾಡಿ. Start--> All programs--> Baraha--> Baraha convert. (ಬರಹ10.0 ಆದರೆ Start--> All programs--> Baraha Software--> Baraha 10--> Tools--> BarahaConvert)  ಬರಹ ಕನ್ವರ್ಟ್ ಸಲಕರಣೆಯ ಬಲಭಾಗದಲ್ಲಿ ANSI: ಎಂಬ ಕೆಳಗೆ ಬಿಳಿ ಬಣ್ಣದ ಬಾಕ್ಸ್ ಇರುತ್ತದೆ. ಅಲ್ಲಿ ನೀವು ನುಡಿ(ANSI)ಯಲ್ಲಿ ಬರೆದಿರುವುದನ್ನು ಪೇಸ್ಟ್ ಮಾಡಿ, ಮತ್ತು ಅದರ ಪಕ್ಕ BRHCODE ಕಡೆಗೆ ಮುಖಮಾಡಿರುವ ಬಾಣದ ಗುರುತನ್ನು ಒತ್ತಿ.
 


ಮುಂದೆ BRHCODEನಲ್ಲಿ ಒಂದಿಷ್ಟು ಅಕ್ಷರಗಳು ಬರುತ್ತದೆ. ಆಗ BRHCODEನಿಂದ UNICODE ಕಡೆಗೆ ಮುಖ ಮಾಡಿರುವ ಬಾಣದ ಗುರುತನ್ನು ಒತ್ತಿ.


ಅಲ್ಲಿಗೆ ನೀವು ನುಡಿಯಲ್ಲಿ ಬರೆದಿರುವುದು ಯೂನಿಕೋಡ್‌ಗೆ ಪರಿವರ್ತನೆಯಾಗಿರುತ್ತದೆ. ಅದನ್ನು ನೋಡಲು UNICODE ಪಕ್ಕದಲ್ಲಿರುವ View ಬಟನ್ ಒತ್ತಿ.


ಈಗ ಯೂನಿಕೋಡ್‌ಗೆ ಪರಿವರ್ತನೆಯಾಗಿರುವ ಪಠ್ಯವು ನೋಟ್‌ಪ್ಯಾಡ್‌ನಲ್ಲಿ ಓಪನ್ ಆಗುತ್ತದೆ. ಅದನ್ನು ನೀವು ಸೇವ್ ಮಾಡಿಕೊಳ್ಳಬಹುದು.


ಈ ವಿಷಯವಾಗಿ ಏನಾದರೂ ಸಂದೇಹಗಳಿದ್ದರೆ ಪ್ರಶ್ನೆಗಳನ್ನು ಕೇಳಿ, ಪರಿಹರಿಸುವ ಪ್ರಯತ್ನ ಮಾಡುವೆ.

ಧನ್ಯವಾದಗಳೊಂದಿಗೆ,
ಪ್ರಸನ್ನ.ಎಸ್.ಪಿ



Wednesday, October 13, 2010

ಮೈಕ್ರೋಸಾಫ್ಟ್ ವರ್ಡ್‌‌‌ನಲ್ಲಿ ಪ್ರತ್ಯೇಕ ಪೇಜ್ ಸೆಟ್ಟಿಂಗ್

ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ಬೇರೆ ಬೇರೆ ಪುಟಕ್ಕೆ ಪ್ರತ್ಯೇಕ ಪೇಜ್ ಸೆಟ್ಟಿಂಗ್ ಮಾಡಬಹುದು. ಉದಾಹರಣೆಗೆ ಮೊದಲನೆ ಪುಟ A4, ಎರಡನೆ ಪುಟ Legal ಹಾಗೂ ಮೂರನೆ ಪುಟ 4X6 ಅಳತೆ ಹೊಂದಿರುವಂತೆ ಸೆಟ್ ಮಾಡಬಹುದು. ಅದು ಹೇಗೆಂದು ನೋಡೋಣ,

ಮೊದಲು ನೀವು ಯಾವ ಪುಟದ ವಿನ್ಯಾಸ ಬದಲಿಸಬೇಕೋ ಆ ಪುಟದ ಪ್ರಾರಂಭದಲ್ಲಿ ಕರ್ಸರ್‍ ಕ್ಲಿಕ್ ಮಾಡಿ. ನಂತರ Page Setup ಒತ್ತಿ.(File--> Page Setup.) ಪೇಜ್ ಸೆಟಪ್‌ನಲ್ಲಿ Margins, Paper ಮತ್ತು Layoutಗಳನ್ನು ಬೇಕಾದ ಅಳತೆಗೆ ಬದಲಿಸಿಕೊಂಡ ನಂತರ Paper ಟ್ಯಾಬ್ ಮೇಲೆ ಕ್ಲಿಕ್ ಮಾಡಿ, ಕೆಳಭಾಗದಲ್ಲಿ Previewನಲ್ಲಿ Apply to: ಎಂದಿರುತ್ತದೆ, ಅಲ್ಲಿ This point forward ಆರಿಸಿ OK ಒತ್ತಿ


 
(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)


ಈಗ ನೋಡಿ ನೀವು ಸೆಟ್ ಮಾಡಿರುವ ಪುಟದ ಅಳತೆ ಹಿಂದಿನ ಪುಟಕ್ಕಿಂತ ಭಿನ್ನವಾಗಿರುತ್ತದೆ.


ಇದೇ ರೀತಿ ವರ್ಡ್ ತಂತ್ರಾಂಶದಲ್ಲಿ ವಿವಿಧ ಪುಟಗಳು ಬೇರೆ ಬೇರೆ ಅಳತೆ ಹೊಂದಿರುವಂತೆ ಮಾಡಬಹುದು.

© ಪ್ರಸನ್ನ ಶಂಕರಪುರ

Web Hosting

Wednesday, October 6, 2010

ಫೀಡ್ ಬರ್ನರ್‍ ಮತ್ತು ಟ್ವಿಟರ್‍

ಫೀಡ್ ಬರ್ನರ್‌ನ ಹಿಂದಿನ ಸಂಚಿಕೆಯಲ್ಲಿ ಬ್ಲಾಗ್ ಓದುಗರಿಗೆ ನಿಮ್ಮ ಲೇಖನಗಳನ್ನು ಇ-ಮೇಲ್ ಮೂಲಕ ತಲುಪಿಸುವುದು ಹೇಗೆಂದು ತಿಳಿಸಿದ್ದೆ. ಈ ಸಲ, ನೀವು ಬ್ಲಾಗಿನಲ್ಲಿ ಹೊಸ ಬರಹ ಸೇರಿಸಿದಾಗ ಅದರ ಶೀರ್ಷಿಕೆ ತಾನಾಗಿಯೇ ಟ್ವಿಟರ್‌ನಲ್ಲಿ ಬರುವಂತೆ ಮಾಡುವುದು ಹೇಗೆ ಎಂದು ನೋಡೋಣ.(ಇದಕ್ಕೆ ನಿಮ್ಮಲ್ಲಿ ಒಂದು ಟ್ವಿಟರ್‍ ಅಕೌಂಟ್ ಇರಬೇಕು. ಇದರ ಉಪಯೋಗವೆಂದರೆ ನೀವು ನಿಮ್ಮ ಬ್ಲಾಗಿನಲ್ಲಿ ಹೊಸ ಲೇಖನ ಬರೆದಾಗ ಅದರ ಶೀರ್ಷಿಕೆ ಹಾಗೂ ಲೇಖನದ ಒಂದೆರಡು ಸಾಲು ಜೊತೆಗೆ ಆ ಲೇಖನಕ್ಕೆ ಲಿಂಕ್ ಟ್ವಿಟರ್‌ನಲ್ಲಿ ಪ್ರಕಟವಾಗುತ್ತದೆ. ಅದನ್ನು ನೋಡುವ ನಿಮ್ಮ ಟ್ವಿಟರ್‍ ಹಿಂಬಾಲಕರು{Followers} ನಿಮ್ಮ ಬ್ಲಾಗಿಗೆ ಭೇಟಿ ನೀಡಬಹುದು.)

ಈಗ ಅದನ್ನು ಪ್ರಾರಂಭಿಸುವುದು ಹೇಗೆ ನೋಡೋಣ. ಮೊದಲು ಫೀಡ್ ಬರ್ನರ್‍ ತಾಣಕ್ಕೆ ಹೋಗಿ(http://feedburner.com). ಅಲ್ಲಿ ನಿಮ್ಮ ಗೂಗಲ್ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ಕೊಟ್ಟು ಲಾಗಿನ್ ಆಗಿ.


(ಚಿತ್ರಗಳನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

ನಂತರ ನಿಮ್ಮ ಫೀಡ್ ಟೈಟಲ್ (FEED TITLE) ಮೇಲೆ ಕ್ಲಿಕ್ ಮಾಡಿ.




 ನಂತರ ಬರುವ ವಿಂಡೋನಲ್ಲಿ ಮೇಲ್ಗಡೆ Publicize ಎಂಬ ಟ್ಯಾಬ್ ಇರುತ್ತದೆ. ಅದರ ಮೇಲೆ ಕ್ಲಿಕ್ಕಿಸಿ.



ಈಗ ಎಡಬದಿಯಲ್ಲಿರುವ Socialize ಒತ್ತಿ. Select account ಕೆಳಗೆ ಇರುವ Add a Twitter account ಮೇಲೆ ಕ್ಲಿಕ್ ಮಾಡಿ.




ಈಗ ಒಂದು ಹೊಸ ಟ್ವಿಟರ್‍ ವಿಂಡೋ ತೆರೆಯುತ್ತದೆ. ಅಲ್ಲಿ ನಿಮ್ಮ ಟ್ವಿಟರ್‍ ಯೂಸರ್‍ ನೇಮ್ ಮತ್ತು ಪಾಸ್‌ವರ್ಡ್ ಟೈಪಿಸಿ, Allow ಬಟನ್ ಒತ್ತಿ.




ಇಷ್ಟು ಮಾಡಿದರೆ ಅರ್ಧ ಕೆಲಸ ಮುಗಿದಂತೆ ಆಯಿತು. ಈಗ ಇನ್ನೊಂದು ವಿಂಡೋನಲ್ಲಿರುವ ಫೀಡ್ ಬರ್ನರ್‌ನ Socialize ಆಯ್ಕೆಗೆ ಬನ್ನಿ. Post content: ಇಲ್ಲಿ ಲೇಖನದ ಶೀರ್ಷಿಕೆ ಮಾತ್ರ ಟ್ವೀಟ್ ಆಗಬೇಕೇ ಅಥವಾ ಶೀರ್ಷಿಕೆಯ ಜೊತೆ ಲೇಖನದ ಒಂದೆರಡು ಸಾಲುಗಳೂ ಸೇರಬೇಕೆ ಎಂದು ಆರಿಸಿ. Include link ಮತ್ತು Leave room for retweets ಸೆಲೆಕ್ಟ್ ಮಾಡಿ. ಉಳಿದ ಆಯ್ಕೆಗಳು ಅಷ್ಟೇನೂ ಮುಖ್ಯವಲ್ಲ, ಬೇಕಿದ್ದರೆ ಅವುಗಳನ್ನು ತುಂಬಿಸಿ.



ನಂತರ ಕೆಳಗೆ Sample Item Preview ನೋಡಿಕೊಳ್ಳಿ. ಎಲ್ಲಾ ಸರಿಯಿದೆ ಎನಿಸಿದರೆ ಕೊನೆಯಲ್ಲಿ Activate ಬಟನ್ ಇರುತ್ತದೆ, ಅದನ್ನು ಒತ್ತಿ.


ಅಲ್ಲಿಗೆ ಎಲ್ಲಾ ಕೆಲಸಗಳು ಮುಗಿದಂತೆ. ಮುಂದಿನ ಸಲ ನೀವು ನಿಮ್ಮ ಬ್ಲಾಗ್‌ನಲ್ಲಿ ಹೊಸ ಬರಹ ಸೇರಿಸಿದಾಗ ಅದರ ಶೀರ್ಷಿಕೆ ಮತ್ತು ಆ ಬರಹಕ್ಕೆ ಲಿಂಕ್ ಟ್ವೀಟಾಗುತ್ತದೆ. ಇದರ ಜೊತೆಗೆ ನೀವು ಫೇಸ್‌‌ಬುಕ್‌ನಲ್ಲಿ ಟ್ವಿಟರ್‍ ಅಪ್ಲಿಕೇಷನ್ ಸೇರಿಸಿದ್ದರೆ ಅಲ್ಲಿಯೂ ಆ ಟ್ವೀಟ್ ನಿಮ್ಮ ಸ್ನೇಹಿತರಿಗೆ ಕಾಣಿಸುತ್ತದೆ. ಆಗ ಅವರು ನಿಮ್ಮ ಬ್ಲಾಗಿಗೆ ಭೇಟಿ ನೀಡಬಹುದು.(ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವುದು ಜಾಣತನ ಅಲ್ಲವೇ?) ನಿಮ್ಮಲ್ಲಿ ಟ್ವಿಟರ್‍ ಅಕೌಂಟ್ ಇಲ್ಲದಿದ್ದರೆ ಇನ್ನೂ ಏಕೆ ಕಾಯುತ್ತಿದ್ದೀರ? ಈಗಲೇ ಒಂದು ಅಕೌಂಟ್ ಹೊಂದಿ ಮತ್ತು ನಿಮ್ಮ ಬ್ಲಾಗಿಗೆ ಓದುಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಿ.

ಈ ವಿಧಾನ ಬೇಡ ಎನ್ನುವುದಾದರೆ ನಿಮ್ಮ ಬ್ಲಾಗ್ ಪೋಸ್ಟ್‌‌ನ ಕೆಳಗೆ ಟ್ವೀಟ್ ಬಟನ್ ಇರುತ್ತದೆ. ಅದನ್ನು ಒತ್ತಿ ಟ್ವೀಟಿಸಬಹುದು.

ಹ್ಞಾಂ... ಸಂಪದದಲ್ಲೂ ಟ್ವೀಟ್ ಬಟನ್ ಇದೆ ಗಮನಿಸಿದ್ದೀರಾ? 


© ಪ್ರಸನ್ನ ಶಂಕರಪುರ

Web Hosting

Monday, September 20, 2010

ಫೀಡ್ ಬರ್ನರ್‍ ಮತ್ತು Email Subscription

ನಿಮ್ಮ ಬ್ಲಾಗ್ ಓದುಗರಿಗೆ ಪ್ರತೀ ಬಾರಿ ನಿಮ್ಮ ಬ್ಲಾಗಿಗೆ ಬಂದು ಹೊಸ ಬರಹಗಳನ್ನು ಓದುವುದಕ್ಕೆ ತೊಂದರೆಯಾಗುತ್ತಿರಬಹುದು. ಅದಕ್ಕಾಗಿ ನೀವು ಅವರಿಗೆ ನಿಮ್ಮ ಹೊಸ ಬರಹಗಳನ್ನು ಇ-ಮೇಲ್ ಮೂಲಕ ತಲುಪಿಸಬಹುದು. ಅದಕ್ಕಾಗಿ ಒಂದಿಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅದನ್ನೀಗ ವಿವರವಾಗಿ ನೋಡೋಣ.

(ಇಲ್ಲಿರುವ ಚಿತ್ರಗಳು ಚಿಕ್ಕದಾಗಿದೆ. ಅವುಗಳನ್ನು ಸ್ಪಷ್ಟವಾಗಿ ನೋಡಲು ಹಾಗೂ ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)



ಮೊದಲಿಗೆ http://feedburner.google.com ತಾಣಕ್ಕೆ ಹೋಗಿ. ಅಲ್ಲಿ ನಿಮ್ಮ ಗೂಗಲ್ ಅಕೌಂಟ್ ಮೂಲಕ ಲಾಗಿನ್ ಆಗಿ.





Type your blog or feed address here: ಎಂದಿರುವಲ್ಲಿ ನಿಮ್ಮ ಬ್ಲಾಗ್ ವಿಳಾಸ ಅಥವಾ ಫೀಡ್ ವಿಳಾಸ ಕೊಡಿ. Next ಬಟನ್ ಒತ್ತಿರಿ.


 


Identify Feed Source ಕೇಳಿದಾಗ ಫೀಡ್ ಸೋರ್ಸ್ ಆರಿಸಿ (Atom ಅಥವಾ RSS feeds). Next ಬಟನ್ ಒತ್ತಿ.





ಫೀಡ್ ಟೈಟಲ್ ಹಾಗೂ ಫೀಡ್ ಅಡ್ರೆಸ್ ನೀಡಿ. (ಏನೂ ನೀಡದಿದ್ದರೂ ಪರವಾಗಿಲ್ಲ, ಮುಂಚೆಯೇ ಆ ಫೀಲ್ಡ್‌‌ಗಳು ತುಂಬಲ್ಪಟ್ಟಿರುತ್ತದೆ. ಬೇಕಿದ್ದರೆ ಬದಲಾಯಿಸಿಕೊಳ್ಳಬಹುದು.) ನಂತರ Next ಬಟನ್ ಒತ್ತಿ.


 



ಮುಂದಿನ ವಿಂಡೋನಲ್ಲಿ Skip directly to feed management ಒತ್ತಿ. ಅಥವಾ ನಿಮಗೆ ಇನ್ನಷ್ಟು ಸೌಲಭ್ಯಗಳು ಬೇಕಿದ್ದರೆ Next ಒತ್ತಿ. ಆದರೆ ಆ ಸೌಲಭ್ಯಗಳನ್ನು ನಂತರವೂ ಪಡೆಯಬಹುದು.





ಮುಂದಿನ ವಿಂಡೋನಲ್ಲಿ ಮೇಲೆ ಕಾಣುವ Publicize ಟ್ಯಾಬ್‌ನ್ನು ಒತ್ತಿ. (ಸಹಾಯ ಬೇಕಿದ್ದರೆ Blogger ಹಾಗೂ TypePad ಕೆಳಗೆ ಲಿಂಕ್‌ಗಳು ಇರುತ್ತದೆ. ಅದನ್ನು ಬಳಸಬಹುದು.)






Publicize ಟ್ಯಾಬ್‌ನ ಎಡಬದಿಯಲ್ಲಿ Email Subscriptions ಎಂಬ ಲಿಂಕ್ ಇರುತ್ತದೆ. ಅದನ್ನು ಒತ್ತಿ.






ನಂತರ Email Subscriptionsನಲ್ಲಿ "Activate" ಬಟನ್ ಒತ್ತಿ. 




ಮುಂದೆ ಬರುವ Subscription Management ವಿಂಡೋನಲ್ಲಿ "Subscription Form Code" ಇರುತ್ತದೆ. ಅದನ್ನು ಕಾಪಿ ಮಾಡಿಕೊಂಡು ನಿಮ್ಮ ಬ್ಲಾಗ್ ಅಥವಾ ಇತರ ತಾಣದಲ್ಲಿ HTML code support ಮಾಡುವ widgetನಲ್ಲಿ ಪೇಸ್ಟ್ ಮಾಡಿ ಉಪಯೋಗಿಸಬಹುದು. ಅಥವಾ ನೀವು  TypePad/Blogger ಉಪಯೋಗಿಸುತ್ತಿದ್ದಲ್ಲಿ ಅದನ್ನು ಆರಿಸಿಕೊಂಡು Go ಬಟನ್ ಒತ್ತಿ.






ನಂತರ ಬ್ಲಾಗ್‌ನ್ನು ಸೆಲೆಕ್ಟ್ ಮಾಡಿ, ಅದಕ್ಕೊಂದು ಹೆಸರು ಕೊಡಿ. ಸಾಮಾನ್ಯವಾಗಿ ಟೈಟಲ್ "Subscribe via email" ಎಂದಿರುತ್ತದೆ. ಅದಾದ ನಂತರ ADD WIDGET ಬಟನ್ ಒತ್ತಿ. 





ಅಲ್ಲಿಗೆ Email Subscription Form ಸೇರಿಸಿಯಾಯಿತು. ಅದನ್ನು ನಿಮ್ಮ ಬ್ಲಾಗ್ ಡಿಸೈನ್‌ನಲ್ಲಿ ಎಲ್ಲಿ ಬೇಕೋ ಅಲ್ಲಿ ಇಟ್ಟು ಸೇವ್ ಮಾಡಿಕೊಳ್ಳಿ.





 ಈಗ ನಿಮ್ಮ ಬ್ಲಾಗ್ ನೋಡಿದರೆ ಅಲ್ಲಿ Email Subscription Form ಕಾಣಿಸುತ್ತದೆ.





ನಂತರ ಮತ್ತೆ ಫೀಡ್ ಬರ್ನರ್‌ಗೆ ಬನ್ನಿ. Delivery Options ಕ್ಲಿಕ್ ಮಾಡಿ. Select Timezoneನಲ್ಲಿ ನಿಮ್ಮ Timezone ಆರಿಸಿ. Schedule Email Delivery: ಎಂಬಲ್ಲಿ ಚಂದಾದಾರರಿಗೆ ಇ-ಮೇಲ್‌ನ್ನು ಯಾವ ಸಮಯದಲ್ಲಿ ಕಳುಹಿಸಬೇಕು (ನೀವು ನಿಮ್ಮ ಬ್ಲಾಗ್‌ನಲ್ಲಿ ಹೊಸ ಬರಹ ಸೇರಿಸಿದಾಗ ಅದು ಚಂದಾದಾರರಿಗೆ ಆ ದಿನದ ಯಾವ ಸಮಯದಲ್ಲಿ ತಲುಪಬೇಕು) ಎಂದು ಸೆಲೆಕ್ಟ್ ಮಾಡಿ Save ಒತ್ತಿ.






ಸಧ್ಯಕ್ಕೆ ಇಷ್ಟು ಸಾಕು ಮುಂದಿನ ಭಾಗದಲ್ಲಿ ಫೀಡ್ ಬರ್ನರ್‌‌ನ ಇನ್ನಷ್ಟು ಸೌಲಭ್ಯಗಳನ್ನು ಪರಿಚಯಿಸುವೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಏನಾದರೂ ಸಂದೇಹಗಳಿದ್ದರೆ ಕೇಳಿ, ಬಗೆಹರಿಸುವ ಪ್ರಯತ್ನ ಮಾಡುವೆ.

-ಪ್ರಸನ್ನ.ಎಸ್.ಪಿ

ಅಂತಃಸ್ಫುರಣ

Web Hosting

Monday, September 13, 2010

ಅಂತಃಸ್ಫುರಣದ ಹೊಸ ಬರಹಗಳನ್ನು ಇ-ಮೇಲ್ ಮೂಲಕ ಪಡೆಯಿರಿ.

"ಅಂತಃಸ್ಫುರಣ"ದಲ್ಲಿ ಪ್ರಕಟವಾಗುವ ಹೊಸ ಬ್ಲಾಗ್ ಬರಹ ಹಾಗೂ ಲೇಖನಗಳನ್ನು ಓದಲು ಪ್ರತೀ ಸಲ ಈ ಬ್ಲಾಗಿಗೆ ಬರಲು ನಿಮಗೆ ತೊಂದರೆಯಾಗುತ್ತಿದ್ದರೆ, ನನ್ನ ಬರಹಗಳನ್ನು ಓದಲು ಇಲ್ಲೊಂದು ಸುಲಭದ ವಿಧಾನವಿದೆ. ಕೆಳಗೆ ಇರುವ ಬಾಕ್ಸ್‌‌ನಲ್ಲಿ ನಿಮ್ಮ ಇ-ಮೇಲ್ ವಿಳಾಸ ನಮೂದಿಸಿ, ನಂತರ "ಅಂತಃಸ್ಫುರಣಕ್ಕೆ ನಾನು ಚಂದಾದಾರನಾಗಬಯಸುತ್ತೇನೆ" ಬಟನ್ ಒತ್ತಿರಿ. Verification ವಿಂಡೋನಲ್ಲಿ ಬರುವ ಅಕ್ಷರಗಳನ್ನು ಟೈಪಿಸಿ verify ಮಾಡಿ. ನಂತರ ನಿಮ್ಮ ಇ-ಮೇಲ್ ಖಾತೆಗೆ kannadaprasanna[at]gmail.comನಿಂದ ಒಂದು  ಇ-ಮೇಲ್ ಬರುತ್ತದೆ, ಅದರಲ್ಲಿರುವ ಲಿಂಕ್‌‌ನ್ನು ಒತ್ತಿರಿ. ಇಷ್ಟು ಮಾಡಿದರೆ ಮುಂದೆ ಅಂತಃಸ್ಫುರಣದಲ್ಲಿ ಪ್ರಕಟವಾಗುವ ಎಲ್ಲ ಬ್ಲಾಗ್ ಬರಹ ಹಾಗೂ ಲೇಖನಗಳು ಇ-ಮೇಲ್ ಮುಖಾಂತರ ನಿಮಗೆ ತಲುಪುತ್ತದೆ. ಇದಕ್ಕೆ ಚಂದಾದಾರರಾದ ನಂತರ ನಿಮಗೆ ಈ ಸೌಲಭ್ಯ ಬೇಡ ಎನಿಸಿದರೆ unsubscribe ಮಾಡುವುದಕ್ಕೆ ಕೂಡ ಅವಕಾಶವಿದೆ, unsubscribe ಮಾಡುವ ವಿಧಾನವು ಅಂತಃಸ್ಫುರಣದಿಂದ ಬರುವ ಪ್ರತೀ ಇ-ಮೇಲ್ ಜೊತೆಗೆ ವಿವರಿಸಲ್ಪಟ್ಟಿರುತ್ತದೆ.


ಇಲ್ಲಿ ನಿಮ್ಮ ಇ-ಮೇಲ್ ವಿಳಾಸವನ್ನು ನಮೂದಿಸಿ, ನಂತರ ಅದರ ಕೆಳಗಿನ ಬಟನ್ ಒತ್ತಿರಿ.


ನಿಮ್ಮ ಇ-ಮೇಲ್ ವಿಳಾಸವನ್ನು ಎಲ್ಲಿಯೂ ಬಹಿರಂಗಗೊಳಿಸಲಾಗುವುದಿಲ್ಲ. ಅಸಲಿಗೆ ನನಗೆ ಕೂಡಾ ನಿಮ್ಮ ಇ-ಮೇಲ್ ವಿಳಾಸ ಗೊತ್ತಾಗುವುದಿಲ್ಲ. ಹಾಗಾಗಿ ನೀವು ಧೈರ್ಯವಾಗಿ ನಿಮ್ಮ ಇ-ಮೇಲ್ ವಿಳಾಸ ಕೊಡಬಹುದು.



ಇದನ್ನು ನೋಡಿದ ನಂತರ ನಿಮ್ಮ ಬ್ಲಾಗ್ ಓದುಗರಿಗೂ ಇದೇ ರೀತಿಯ ಸೌಲಭ್ಯ ಒದಗಿಸಬೇಕು ಎಂದೆನಿಸುತ್ತಿದೆಯೇ? ಹಾಗಾದರೆ ನನ್ನ ಮುಂದಿನ ಲೇಖನವನ್ನು ನಿರೀಕ್ಷಿಸಿ, :-)

ಹ್ಞಾ... ನನ್ನ ಈ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಲು ಮರೆಯಬೇಡಿ! :-)
 

ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ

Tuesday, August 10, 2010

ಉಬುಂಟು dual boot

ವಿಂಡೋಸ್ ಹಾಗೂ ಉಬುಂಟು dual bootನಲ್ಲಿ, ಮೊದಲು ವಿಂಡೋಸ್ ಇನ್ಸ್‌ಟಾಲ್ ಮಾಡಿ ನಂತರ ಉಬುಂಟು ಇನ್ಸ್‌ಟಾಲ್ ಮಾಡಿದ್ದರೆ, ಉಬುಂಟು default ಆಪರೇಟಿಂಗ್ ಸಿಸ್ಟಮ್ ಆಗಿರುತ್ತದೆ. ಹಾಗಾಗಿ ಪ್ರತಿ ಸಲ ಕಂಪ್ಯೂಟರ್‍ ಆನ್ ಮಾಡಿದಾಗ default OS ಆದ ಉಬುಂಟು ಬೂಟ್ ಆಗುತ್ತದೆ. ನಿಮಗೆ ವಿಂಡೋಸ್ ಬೂಟ್ ಆಗಬೇಕೆಂದರೆ, ಉಬುಂಟು ಬೂಟ್ ಆಗುವ ಮೊದಲೇ ವಿಂಡೋಸ್‌‌ನ್ನು ಆಯ್ಕೆ ಮಾಡಬೇಕಾಗುತ್ತದೆ. ಪ್ರತೀ ಸಲ ವಿಂಡೋಸ್‌‌‌ನ್ನು ಸೆಲೆಕ್ಟ್ ಮಾಡುವ ಬದಲು ವಿಂಡೋಸ್‌‌ನ್ನು default OS ಆಗಿ ಸೆಲೆಕ್ಟ್ ಮಾಡಲು menu.lst ಫೈಲ್‌‌ನ್ನು ಎಡಿಟ್ ಮಾಡಬಹುದು. ಆದರೆ ಅದರಲ್ಲಿ ಸ್ವಲ್ಪ ಎಡವಟ್ಟಾದರೂ ಆಮೇಲೆ ಯಾವ ಆಪರೇಟಿಂಗ್ ಸಿಸ್ಟಮ್ ಕೂಡಾ ಬೂಟ್ ಆಗುವುದಿಲ್ಲ. ಹಾಗಾಗಿ ವಿಂಡೋಸ್‌‌ನ್ನು default OS ಆಗಿ ಆರಿಸಲು ಒಂದು ಸರಳ ಹಾಗೂ ಸುರಕ್ಷಿತ ವಿಧಾನವಿದೆ.

ನಿಮ್ಮ ಉಬುಂಟು ಸಿಸ್ಟಮ್‌ನ್ನು ಇಂಟರ್‌‌ನೆಟ್‌‌ಗೆ ಕನೆಕ್ಟ್ ಮಾಡಿ. ನಂತರ ಟರ್ಮಿನಲ್ ಓಪನ್ ಮಾಡಿ ಈ ಕೆಳಗಿನ ಕಮ್ಯಾಂಡನ್ನು ರನ್ ಮಾಡಿ :

$ sudo apt-get install startupmanager

startup manager ಇನ್ಸ್‌ಟಾಲ್ ಆದ ನಂತರ, ಆ ತಂತ್ರಾಂಶವನ್ನು ಉಪಯೋಗಿಸಿ ವಿಂಡೋಸ್‌ನ್ನು default OS ಆಗಿ ಆರಿಸಬಹುದು.

(ಶೀಘ್ರದಲ್ಲೇ ಇದಕ್ಕೆ ಸಂಬಂಧಿಸಿದ ಸ್ಕ್ರೀನ್‌‌ಶಾಟ್‌ಗಳನ್ನು ಹಾಕುವ ಪ್ರಯತ್ನ ಮಾಡುವೆ)

Thursday, August 5, 2010

ವಿಂಡೋಸ್ ಬೂಟ್‌‌ನಲ್ಲಿ ತೊಂದರೆ


ನಿನ್ನೆ ನನ್ನ ಕಂಪ್ಯೂಟರ್‍ ಚಾಲನೆ ಮಾಡಿದರೆ ವಿಂಡೋಸ್(ಎಕ್ಸ್‌‌ಪಿ) ಬೂಟ್ ಆಗುತ್ತಿರಲಿಲ್ಲ, ಬದಲಿಗೆ

"Windows could not start because of an error in the software.

Please report this problem as,
load needed DLLs for kernel.

Please contact your support person to report this problem"

ಎಂಬ ಸಂದೇಶ ಬರುತ್ತಿತ್ತು. fixmbr, fixboot, ಮುಂತಾದ ಕಮ್ಯಾಂಡ್‌‌ಗಳನ್ನು ಉಪಯೋಗಿಸಿ ವಿಂಡೋಸ್ ಸರಿಮಾಡಲು ಹೋದರೆ ಏನು ಪ್ರಯೋಜನವಾಗಲಿಲ್ಲ. ವಿಂಡೋಸ್ repair ಕೂಡ ಆಗುತ್ತಿರಲಿಲ್ಲ. ಅದನ್ನು ಸರಿಪಡಿಸುವಷ್ಟು ತಾಳ್ಮೆಯೂ ಇರಲಿಲ್ಲ. ಕೊನೆಗೆ ಲಿನಕ್ಸ್ ಬಳಸಿ C ಡ್ರೈವ್‌‌ನ ಬ್ಯಾಕಪ್ ತೆಗೆದುಕೊಂಡು, ವಿಂಡೋಸ್‌ನ್ನು ಮರುಸ್ಥಾಪಿಸಿದೆ.

ಈ ರೀತಿ ಏಕಾಗಿರಬಹುದು ಎಂದು ನಿಮಗೇನಾದರೂ ಗೊತ್ತಾದರೆ ತಿಳಿಸಿ. ಹಾಗೆಯೇ ಮುಂದೆ ಈ ರೀತಿ ಅದರೆ ಹೇಗೆ ಸರಿಪಡಿಸಬಹುದು ಎಂದೂ ತಿಳಿಸಿ.

-ಪ್ರಸನ್ನ.ಎಸ್.ಪಿ

Wednesday, August 4, 2010

ಭಾರತೀಯರಿಗಾಗಿ ಭಾರತೀಯ ಬ್ರೌಸರ್


"ಭಾರತೀಯರಿಗಾಗಿ ಭಾರತೀಯ ಬ್ರೌಸರ್‍" ಎಂಬ ಸ್ಲೋಗನ್‌‌ನೊಂದಿಗೆ ಬಂದಿದೆ ಎಪಿಕ್ ಬ್ರೌಸರ್‍. ಮೊಝಿಲ್ಲ ಫೈರ್‌‌ಫಾಕ್ಸ್‌‌ನ ಪ್ಲಾಟ್‌‌ಫಾರ್ಮ್‌‌ನಲ್ಲಿಯೇ ನಿರ್ಮಿತವಾಗಿದ್ದರೂ ಫೈರ್‌‌‌ಫಾಕ್ಸ್‌ಗಿಂತ ಸಾಕಷ್ಟು ಭಿನ್ನವಾಗಿದೆ. Anti-virus ಹೊಂದಿರುವುದು ಇದರ ವಿಶೇಷ. 1500ಕ್ಕೂ ಹೆಚ್ಚು ಥೀಮ್ ಹಾಗೂ ವಾಲ್‌ಪೇಪರ್‌‌ಗಳನ್ನು ಆರಿಸಿಕೊಳ್ಳುವ ಅವಕಾಶವಿದೆ. ಇದರಲ್ಲಿ ಸಾಕಷ್ಟು ಉಪಯುಕ್ತ ಸೌಲಭ್ಯಗಳಿವೆ. ಸೈಡ್‌‌ಬಾರ್‍ ಅಪ್ಲಿಕೇಷನ್‌‌ಗಳನ್ನು ಹೊಂದಿದ ಮೊದಲ ಬ್ರೌಸರ್‍ ಇದು. ಯಾವುದೇ ತಂತ್ರಾಂಶದ ಸಹಾಯವಿಲ್ಲದೆ ಈ ಬ್ರೌಸರ್‌‌ನ ಮೂಲಕ ಎಲ್ಲಾ ಭಾರತೀಯ ಭಾಷೆಗಳಲ್ಲಿ ಬರೆಯಬಹುದು. ನಿಮ್ಮ ಕಂಪ್ಯೂಟರ್‌‌ನ್ನು ಈ ಬ್ರೌಸರ್‌‌ ಮೂಲಕವೇ ಜಾಲಾಡಬಹುದು. to do list, alerts, stopwatch ಮುಂತಾದ ಸಲಕರಣೆಗಳಿವೆ. ಟ್ವಿಟರ್‍, ಫೇಸ್‌‌ಬುಕ್, ಆರ್ಕುಟ್, ಮುಂತಾದ 1500ಕ್ಕು ಹೆಚ್ಚು ಅಪ್ಲಿಕೇಷನ್‌ಗಳಿವೆ.
(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

ಎಪಿಕ್ ಬ್ರೌಸರ್‌‌‌‌ನ್ನು ಇಲ್ಲಿಂದ ಇಳಿಸಿಕೊಳ್ಳಬಹುದು(ಫೈಲ್ ಸುಮಾರು 10.6 ಎಂಬಿ ಇರುತ್ತದೆ). ಹೆಚ್ಚಿನ ಮಾಹಿತಿ ಇಲ್ಲಿ ದೊರೆಯುತ್ತದೆ.


-ಪ್ರಸನ್ನ.ಎಸ್.ಪಿ

Monday, August 2, 2010

ಬ್ಲಾಗ್‌ಗಳನ್ನು ಫಾಲೋ ಮಾಡುವ ವಿಧಾನ

ನಿಮಗೆ ಇಷ್ಟವಾದ ಬ್ಲಾಗ್‌ಗಳನ್ನು ಫಾಲೋ ಮಾಡಬೇಕೆ? ಹಾಗಾದರೆ ಈ ರೀತಿ ಮಾಡಿ. ಮೊದಲು ನಿಮ್ಮ ಬ್ಲಾಗರ್‍ ಅಕೌಂಟಿಗೆ ಲಾಗಿನ್ ಆಗಿ. ಡ್ಯಾಷ್‌‌ಬೋರ್ಡ್‌ನಲ್ಲಿ ಕೆಳಗಡೆ Reading List ಎಂದು ಇರುತ್ತದೆ. ಅಲ್ಲಿ Blogs I'm Following ಎಂಬ ಆಯ್ಕೆಯ ಕೆಳಗೆ ADD ಎಂಬ ಬಟನ್ ಇರುತ್ತದೆ. ಅದನ್ನು ಕ್ಲಿಕ್ಕಿಸಿ.
 


ನಂತರ Add from URL ಎಂಬಲ್ಲಿ ನೀವು ಫಾಲೋ ಮಾಡಬೇಕಾದ ತಾಣದ ವಿಳಾಸ ನೀಡಿ, NEXT ಬಟನ್ ಒತ್ತಿರಿ.
 


ಅಲ್ಲಿ Follow publicly as (ನಿಮ್ಮ ಹೆಸರು) ಅಥವಾ Follow anonymously ಎಂಬ ಎರಡು ಆಯ್ಕೆ ಇರುತ್ತದೆ. ಅನಾಮಿಕರಾಗಿ ಫಾಲೋ ಮಾಡಬೇಕಿದ್ದರೆ Follow anonymously ಎಂಬುದನ್ನು ಆರಿಸಿ. ಇಲ್ಲದಿದ್ದರೆ Follow publicly as ನ್ನು ಆರಿಸಿ Follow ಒತ್ತಿರಿ.
 


ನಂತರ ನಿಮ್ಮ ಡ್ಯಾಷ್‌‌ಬೋರ್ಡ್‌ನಲ್ಲಿ ಆ ಬ್ಲಾಗ್‌ನ ಹೊಸ ಪೋಸ್ಟ್‌ಗಳ ಒಂದೆರಡು ಸಾಲು ಕಂಡುಬರುತ್ತದೆ. ಪೂರ್ತಿ ಲೇಖನ ಓದಬೇಕೆಂದರೆ ಆ ಲೇಖನದ ಶೀರ್ಷಿಕೆಯ ಮೇಲೆ ಕ್ಲಿಕ್ ಮಾಡಿ ಓದಬಹುದು.
 



ಅಥವಾ ಇನ್ನೊಂದು ವಿಧಾನದಲ್ಲಿ ಬ್ಲಾಗ್‌‌ಗಳನ್ನು ಫಾಲೋ ಮಾಡಬಹುದು. ನೀವು ಫಾಲೋ ಮಾಡಬೇಕಾದ ಬ್ಲಾಗ್‌ಗೆ ಭೇಟಿ ಕೊಡಿ. ಅಲ್ಲಿ ಕಂಡುಬರುವ Follow ಬಟನ್ ಒತ್ತಿರಿ.




ನಂತರ ಅಲ್ಲಿ ಗೂಗಲ್ ಅಥವಾ ನಿಮ್ಮ ಇತರ ಅಕೌಂಟ್ ಇರುವ ಚಿತ್ರದ ಮೇಲೆ ಕ್ಲಿಕ್ ಮಾಡಿ. 
 


ನಿಮ್ಮ ಯೂಸರ್‍ ನೇಮ್ ಹಾಗೂ ಪಾಸ್‌‌ವರ್ಡ್ ನೀಡಿ ಲಾಗಿನ್ ಆಗಿ.
 



ನಂತರ Follow publicly as (ನಿಮ್ಮ ಹೆಸರು) ಅಥವಾ Follow anonymously ಎಂಬ ಆಯ್ಕೆಯಲ್ಲಿ ಒಂದನ್ನು ಆರಿಸಿ Follow ಬಟನ್ ಕ್ಲಿಕ್ ಮಾಡಿ.







-ಪ್ರಸನ್ನ.ಎಸ್.ಪಿ

ನೋಕಿಯ ಮೊಬೈಲ್‌ನಲ್ಲೊಂದು ತಮಾಷೆ

ನಿಮ್ಮ ಬಳಿ ನೋಕಿಯ ಕಲರ್‍ ಬೇಸಿಕ್ ಮೊಬೈಲ್ (ಉದಾ: nokia1600, nokia1208) ಇದ್ದರೆ ಇಲ್ಲೊಂದು ತಮಾಷೆ ಇದೆ ನೋಡಿ. ಕೀ ಪ್ಯಾಡ್‌‌ನಲ್ಲಿ *#5513# ಒತ್ತಿರಿ, ತಕ್ಷಣ ಸ್ಕ್ರೀನ್ ಉಲ್ಟಾ ಆಗುತ್ತದೆ! ಅಂದರೆ ಮೊಬೈಲನ್ನು ತಲೆಕಳಗೆ ಹಿಡಿದು ನೋಡಿದರೆ ಸ್ಕ್ರೀನ್ ಸರಿಯಾಗಿ ಕಾಣುತ್ತದೆ! *#5512# ಒತ್ತಿದರೆ ಸ್ಕ್ರೀನ್ ಎಡಕ್ಕೆ ತಿರುಗುತ್ತದೆ. *#5514# ಒತ್ತಿದರೆ ಸ್ಕ್ರೀನ್ ಬಲಕ್ಕೆ ತಿರುಗುತ್ತದೆ. ಮತ್ತೆ ಸ್ಕ್ರೀನ್ ಸರಿಹೋಗಬೇಕಾದರೆ *#5511# ಒತ್ತಬೇಕು. ಹೈ ಎಂಡ್ ಮಾಡೆಲ್‌ಗಳಲ್ಲಿ ಈ ರೀತಿ ಮಾಡಲು ಸಾಧ್ಯವಿಲ್ಲ. ಬೇಸಿಕ್ ಮಾಡೆಲ್‌ಗಳಲ್ಲಿ ಮಾತ್ರ ಇದು ಸಾಧ್ಯ. ಇದರ ಉಪಯೋಗ ಏನೆಂದು ಕೇಳಬೇಡಿ, ಏಕೆಂದರೆ ನನಗೂ ಇದರ ಉಪಯೋಗ ಗೊತ್ತಿಲ್ಲ! :) ಸುಮ್ಮನೇ ತಮಾಷೆಗೆ ಸ್ಕ್ರೀನ್ ಉಲ್ಟಾ ಮಾಡಿ ಆನಂದಿಸಬಹುದು.




-ಪ್ರಸನ್ನ.ಎಸ್.ಪಿ

Thursday, July 22, 2010

ಕಂಪ್ಯೂಟರ್‌‌ನಲ್ಲಿ ದಾಖಲೆಗಳನ್ನು ಬೇರೆಯವರಿಗೆ ಸಿಗದಂತೆ ರಕ್ಷಿಸುವುದು


ನಿಮ್ಮ ಕಂಪ್ಯೂಟರ್‌‌ನ್ನು ಬಹಳ ಜನ ಬಳಸುತ್ತಿದ್ದು ಎಲ್ಲರಿಗೂ ಬೇರೆ ಬೇರೆ ಯೂಸರ್‍ ಅಕೌಂಟ್‌‌ಗಳಿದ್ದರೆ, ನೀವು ನಿಮ್ಮ ಖಾಸಗಿ ಅಥವಾ ಗುಪ್ತ ಫೋಲ್ಡರ್‌ಗಳನ್ನು ಬೇರೆಯವರಿಗೆ ಸಿಗದಂತೆ ರಕ್ಷಿಸಬಹುದು. ಅದಕ್ಕಾಗಿ ಹೀಗೆ ಮಾಡಿ. ಮೊದಲು ಕಂಟ್ರೋಲ್ ಪ್ಯಾನಲ್‌ಗೆ ಹೋಗಿ.




ಅಲ್ಲಿ Folder Options ಓಪನ್ ಮಾಡಿ. View ಟ್ಯಾಬ್ ಒತ್ತಿರಿ.




ಅದರಲ್ಲಿ ಕೆಳಗಡೆ Use simple file sharing (Recommended) ಎಂಬುದು ಆಯ್ಕೆಗೊಂಡಿರುತ್ತದೆ. ಅದನ್ನು ತೆಗೆದುಹಾಕಿ ನಂತರ Apply ಒತ್ತಿ.




ಇವಿಷ್ಟು ಮೊದಲನೇ ಹಂತದ ಕೆಲಸಗಳು.




ಈಗ ನೀವು ಯಾವ ಫೋಲ್ಡರ್‌ಗೆ ಸೆಕ್ಯುರಿಟಿ ನೀಡಬೇಕೋ ಆ ಫೋಲ್ಡರ್‌ ಮೇಲೆ ರೈಟ್‌‌ ಕ್ಲಿಕ್ ಮಾಡಿ Propertiesನ್ನು ಓಪನ್ ಮಾಡಿ. ನಂತರ Security ಟ್ಯಾಬ್ ಕ್ಲಿಕ್ ಮಾಡಿ.



Group or user names ಅನ್ನೋದರ ಕೆಳಗಿರುವ Add ಬಟನ್ ಒತ್ತಿರಿ. Enter the object names to select ಅನ್ನುವುದರ ಕೆಳಗಿನ ಬಾಕ್ಸ್‌‌ನಲ್ಲಿ ಯಾರಿಂದ ದಾಖಲೆಗಳನ್ನು ಮುಚ್ಚಿಡಬೇಕೋ ಅವರ ಯೂಸರ್‌ ನೇಮ್‌ನ್ನು ಕೊಟ್ಟು (ಉದಾ:Games) OK ಒತ್ತಿ.






ನಂತರ ಆ ಹೆಸರನ್ನು ಆಯ್ಕೆ ಮಾಡಿ ಕೆಳಗಿನ Full Control ಎದುರಿಗಿರೋ Deny ಅನ್ನೋದನ್ನು ಸೆಲೆಕ್ಟ್ ಮಾಡಿ Apply ಒತ್ತಿ. ಅದೇ ರೀತಿ ಯಾರ್ಯಾರಿಂದ ರಕ್ಷಿಸಬೇಕೋ  ಅವರೆಲ್ಲರ ಯೂಸರ್‌ ನೇಮ್‌ಗಳನ್ನು Add ಮಾಡಿ ಎಲ್ಲದಕ್ಕೂ Deny ಕೊಟ್ಟು OK ಒತ್ತಿರಿ.





ಆದರೆ ಇಷ್ಟೆಲ್ಲಾ ಮಾಡಲು ನಿಮ್ಮದು "ಕಂಪ್ಯೂಟರ್‍ ಅಡ್ಮಿನಿಸ್ಟ್ರೇಟರ್‍" ಅಕೌಂಟ್ ಆಗಿರಬೇಕು. ಹೀಗೆ ಮಾಡಿದ ನಂತರ ಬೇರೆಯವರು ನಿಮ್ಮ ಫೋಲ್ಡರ್‌ನ್ನು ಓಪನ್ ಮಾಡಲು ಹೋದರೆ "ನಿಮಗೆ ಇದನ್ನು ವೀಕ್ಷಿಸಲು ಅನುಮತಿಯಿಲ್ಲ" ಎಂಬ ಸಂದೇಶ ಬರುತ್ತದೆ. ಬೇರೆಯವರದು "ಲಿಮಿಟೆಡ್ ಅಕೌಂಟ್" ಆಗಿದ್ದರೆ ಏನೂ ಮಾಡಲಾಗುವುದಿಲ್ಲ, ಆದರೆ ಅವರದು "ಕಂಪ್ಯೂಟರ್‍ ಅಡ್ಮಿನಿಸ್ಟ್ರೇಟರ್‍" ಅಕೌಂಟ್ ಆಗಿದ್ದರೆ, ಸ್ವಲ್ಪ ತಲೆ ಉಪಯೋಗಿಸಿದರೆ ನಿಮ್ಮ ಫೋಲ್ಡರ್‌ನ್ನು ಭೇಧಿಸಬಹುದು. ಆದರೂ ಅದು ಅಷ್ಟು ಸುಲಭಕ್ಕೆ ಆಗುವ ಕೆಲಸವಲ್ಲ. ಹಾಗೆಂದು ನಿಮ್ಮ ಗುಪ್ತ ದಾಖಲೆಗಳನ್ನು ಬೇರೆಯವರಿಂದ ರಕ್ಷಿಸಲು ಇದು ಅತ್ಯುತ್ತಮ ವಿಧಾನವೇನಲ್ಲ. ಬೇರೆಯವರಿಗೆ ಇದರ ಬಗ್ಗೆ ಗೊತ್ತಿಲ್ಲದಿದ್ದರೆ ಈ ವಿಧಾನ ಉಪಯುಕ್ತ.

ಆದರೆ ಒಂದು ವಿಷಯ ನೆನಪಿಡಿ, ಈ ಕಂಪ್ಯೂಟರ್‍ ಜಗತ್ತಿನಲ್ಲಿ ನೀವೆಷ್ಟೇ ದಾಖಲೆಗಳನ್ನು ಮುಚ್ಚಿಟ್ಟರೂ ಅದನ್ನು ಹ್ಯಾಕ್ ಮಾಡುವವರು ಇದ್ದೇ ಇರುತ್ತಾರೆ. ಆದ್ದರಿಂದ ರಹಸ್ಯ ಮಾಹಿತಿಗಳನ್ನು, ಎಲ್ಲರಿಗೂ ಉಪಯೋಗಿಸಲು ಸಿಗುವಂತಹ ಕಂಪ್ಯೂಟರ್‌ಗಳಲ್ಲಿ ಇಡದಿರುವುದೇ ಒಳಿತು.

-ಪ್ರಸನ್ನ.ಎಸ್.ಪಿ