Wednesday, July 21, 2010

ನಂದು ಸಾರ್‍ ಆ ಜಾಗ...

ನಂದು ಸಾರ್‍ ಆ ಜಾಗ...

"ಏನಯ್ಯಾ, ಬಾಬು ಅವ್ರು ಮನೇಲಿದಾರಾ?"

’ಇದಾರೆ, ಏನಾಗ್ಬೇಕಾಗಿತ್ತು?’

"ನನ್ಹೆಸ್ರು ಗೋಪಾಲ್ ಅಂತ, ಬಾಬು ಅವ್ರನ್ನು ನೋಡ್ಬೇಕಿತ್ತು"

’ಏನ್ ವಿಷ್ಯ ಹೇಳಿ, ಅಣ್ಣಂಗೆ ಹೇಳ್ಬೇಕು’

"ಅವ್ರ ಹೊಸ ಅಪಾರ್ಟ್‌ಮೆಂಟ್ ಬಗ್ಗೆ ಮಾತಾಡ್ಬೇಕಿತ್ತು"

’ಸರಿ ಒಂದ್ನಿಮ್ಷ ಇಲ್ಲೇ ಇರಿ. ಅಣ್ಣನ್ನ ಕೇಳ್ಕಂಡು ಬರ್ತೀನಿ’
    
                     *****


"ಅಣ್ಣಾ, ಯಾರೋ ಗೋಪಾಲ್ ಅನ್ನೋರು ಬಂದಿದಾರೆ. ನಿಮ್ಮನ್ನು ನೋಡ್ಬೇಕಂತೆ"

’ಇಲ್ಲಿ ಆಗಲ್ಲ, ಆಫೀಸ್‌ಗೆ ಬಾ ಅಂತ ಹೇಳಿ ಕಳ್ಸು’

"ಅಣ್ಣಾ... ಅವ್ರು ನಿಮ್ ಹೊಸಾ ಅಪಾರ್ಟ್‌ಮೆಂಟ್ ಬಗ್ಗೆ ಮಾತಾಡ್ಬೇಕಂತೆ"

’ಹೌದಾ... ಗೋಪಾಲ್‌ ಅಂತನಾ?... ಸರಿ ಕಳ್ಸು’
    
                     *****


’ಸರಿ ಹೋಗಿ, ಅಣ್ಣ ಕರೀತಿದಾರೆ’

"ಆಯ್ತು ಕಣಪ್ಪ, ಥ್ಯಾಂಕ್ಸ್"
    
                   *****


"ಸರ್‍, ನಾನು ಗೋಪಾಲ್ ಅಂತ"

’ಸರಿ.. ಸರಿ.. ಬಂದಿದ್ ಏನಕ್ಕೆ ಅದನ್ ಮೊದ್ಲು ಹೇಳು’

"ಅದು... ಅದು..."

’ಸುಮ್ನೆ ಟೈಂ ವೇಸ್ಟ್ ಮಾಡ್ಬೇಡ. ಬಂದಿದ್ದೇನಕ್ಕೆ ಅಂತ ಮೊದ್ಲು ಹೇಳು’

"ಸರ್‍, ನೀವು ರಿಂಗ್ ರೋಡ್ ಜಂಕ್ಷನ್‌ ಹತ್ರ ಹೊಸ ಅಪಾರ್ಟ್‌ಮೆಂಟ್ ಕಟ್ಟಿಸ್ತಿದೀರಲ್ಲ, ಆ 60x100 ಸೈಟ್ ನಂದು. ಒಂದ್ ವರ್ಷದಿಂದ ನಾನು ಅಮೇರಿಕದಲ್ಲಿದ್ದೆ. ಈಗ್ ಬಂದ್ ನೋಡಿದ್ರೆ ನನ್ ಜಾಗ್ದಲ್ಲಿ ನೀವು ಅಪಾರ್ಟ್‌ಮೆಂಟ್ ಕಟ್ತಿದೀರಲ್ಲ, ಇದ್ಯಾವ ನ್ಯಾಯ ನೀವೇ ಹೇಳಿ"

’ಲೇ ಗೂಳಿ ಗುರು, ಆ ಅಪಾರ್ಟ್‌ಮೆಂಟಿನ ಜಾಗದ್ ಡಾಕ್ಯುಮೆಂಟನ್ನ ತಗೊಂಡು ಬಾ’



’ಇದನ್ನೆಲ್ಲಾ ಒಂದ್ಸಲ ಸರಿಯಾಗ್ ನೋಡು’



"ಏನ್ಸಾರ್‍ ಇದು? ಆ ಜಾಗ ನಿಮ್ ಹೆಸ್ರಲ್ಲಿದೆ. ಆದ್ರೆ ನಾನು ಆ ಸೈಟನ್ನು ಹತ್ ವರ್ಷದ್ ಹಿಂದೆ ತಗೊಂಡಿದ್ದು, ಇನ್ನೂ ಯಾರಿಗೂ ಮಾರಿಲ್ಲ. ಇಲ್ನೋಡಿ ನನ್ಹತ್ರ ಆ ಜಾಗದ ಆಸ್ತಿ ಪತ್ರದ ಜೆರಾಕ್ಸ್ ಕಾಪಿ ಇದೆ"

’ಸರಿ, ಅದಕ್ಕೆ ನಾನೇನ್ಮಾಡಕ್ಕಾಗತ್ತೆ? ನನ್ಹತ್ರನೂ ಆಸ್ತಿ ಪತ್ರ ಇದೆ’

"ಹಿಂಗಂದ್ರೆ ಹೇಗೆ ಸಾರ್‍? ನಾನು ಕಷ್ಟ ಪಟ್ಟು ಕೊಂಡಿದ್ದ ಸೈಟು ಅದು"

’ನೋಡು ನೀನೀಗ ನಾನ್ ಹೇಳೋ ಡೀಲ್‌ಗೆ ಗಲಾಟೆ ಮಾಡ್ದೆ ಒಪ್ಕಂಡ್ರೆ ಈ ಮನೆಯಿಂದ ಹೊರ್ಗೆ ಹೋಗ್ತೀಯ, ಇಲ್ಲಾಂದ್ರೆ ಉಳ್ದಿದ್ ವಿಷ್ಯ ನಿಂಗೆ ಬಿಟ್ಟಿದ್ದು ’

"ಏನದು ಸಾರ್‍?"

’ನೋಡು ನಿಂಗೆ ಎಂಟು ಲಕ್ಷ ಕೋಡ್ತೀನಿ. ಇದಕ್ಕೆ ಒಪ್ಕಂಡು ಜಾಗ ಖಾಲಿ ಮಾಡು’

"ಸಾರ್‍, ಎಂಟು ಲಕ್ಷ ತುಂಬಾ ಕಡ್ಮೆ ಆಯ್ತು. 60x100ರ ಸೈಟು ಸಾರ್‍ ಅದು"

’ಏನು... ಇದು ಕಡ್ಮೆನಾ? ಹತ್ ವರ್ಷದ್ ಹಿಂದೆ ಆ ಜಾಗ ತಗೋಬೇಕಾದ್ರೆ ನೀನು ಬರೀ 2 ಲಕ್ಷ ಕೊಟ್ಟಿದ್ದೆ, ಈಗ ನಿಂಗೆ 8 ಲಕ್ಷ ಕೊಡ್ತಿದೀನಿ. 6 ಲಕ್ಷ  ಜಾಸ್ತಿ ಕೊಡ್ತಿಲ್ವ? ಬೇಕಿದ್ರೆ 8 ಲಕ್ಷ ತಗೋ, ಇಲ್ದಿದ್ರೆ  ಏನೂ ಸಿಕ್ಕಲ್ಲ. ಡಾಕ್ಯುಮೆಂಟೆಲ್ಲಾ ನಮ್ ಕಡೆ ಇದೆ. ಏನೋ ಪಾಪ ಗೌರವಸ್ಥರು ಅಂತ ಮರ್ಯಾದೆಯಿಂದ ಮಾತಾಡ್ಸಿದ್ರೆ ನಂಗೇ ಎದ್ರುತ್ರ ಕೊಡ್ತೀಯಾ?’

"ಆಯ್ತು ಸಾರ್‍, ಅಷ್ಟೇ ಕೊಡಿ"

’ಸರಿ ನಾಳೇನೇ ಬಂದು ಕ್ಯಾಷ್ ತಗಂಡು ಹೋಗು. ಹಾಗೇ ಬರ್ತಾ ನಿನ್ಹತ್ರಿರೋ ಆ ಜಾಗದ್ ಡಾಕ್ಯುಮೆಂಟ್‌ಗಳನ್ನು ತಂಗೊಂಡ್ಬಾ. ನಾಳೆ ತರ್ಲಿಲ್ಲಾಂದ್ರೆ ನಾಡಿದ್ದಿಗೆ ನೀನೇ ಇರಲ್ಲ, ನೆನ್ಪಿಟ್ಕೋ’

"ಸರಿ ಸರ್‍, ನಾಳೇನೇ ಬರ್ತೀನಿ"

’ಹ್ಞೂಂ.. ಹ್ಞೂಂ.. ಈಗ ಜಾಗ ಖಾಲಿ ಮಾಡು’

                  *******

-ಪ್ರಸನ್ನ.ಎಸ್.ಪಿ

 

No comments: